ಕಫಾ2 : ಇಥಿಯೋಪಿಯದ ನೈಋತ್ಯದಲ್ಲಿರುವ ಒಂದು ಪ್ರಾಂತ್ಯ. ಆ ರಾಜ್ಯದ ದಕ್ಷಿಣದಲ್ಲಿ, ಸಮುದ್ರದಿಂದ ಬಲುದೂರ, ರೂಡಾಲ್ಫ್‌ ಸರೋವರದ ಉತ್ತರದಂಚಿನ ವರೆಗೆ ಹಬ್ಬಿದೆ. ನಡುನಡುವೆ ಕೊಚ್ಚಿದಂತಿರುವ ಪ್ರಸ್ಥಭೂಮಿಯಿಂದ ಆವೃತವಾದ ಈ ಪ್ರದೇಶದ ಸರಾಸರಿ ಎತ್ತರ 1,818 ಮೀ. ಕೆಲವು ಪರ್ವತ ಶಿಖರಗಳು 3030 ಮೀ ಗಳಿಗಿಂತಲೂ ಎತ್ತರವಾಗಿವೆ.

ಇದರ ಪುರ್ವದ ಗಡಿಯಾಗಿ ಹರಿಯುವ ಓಮೋ ನದಿಗೆ ಅಲ್ಲಲ್ಲಿ ಜಲಪಾತ ಗಳಿರುವುದರಿಂದ ಅದು ನೌಕಾಸಂಚಾರಯೋಗ್ಯವಾಗಿಲ್ಲ. ವಿದ್ಯುದುತ್ಪಾದನೆಯ ಸಾಧ್ಯತೆಗಳನ್ನು ಬಳಸಿಕೊಂಡಿಲ್ಲ.

ಉತ್ತರ ಅಕ್ಷಾಂಶ 50 ಯಿಂದ ಉತ್ತರಕ್ಕಿರುವ ಈ ಪ್ರಾಂತ್ಯದ ವಾಯುಗುಣ ತಂಪಾಗಿದೆ. ಇದರ ಮಧ್ಯಂತರ ಉಷ್ಣತೆ 15.50 ಸೆ. 26.60 ಸೆ. ಅತ್ಯಂತ ಎತ್ತರದ ಪ್ರದೇಶಗಳಲ್ಲಿ ಹಿಮ ಬೀಳುವುದೂ ಉಂಟು. ಉತ್ತರಕ್ಕಿಂತ ದಕ್ಷಿಣದ ಕಡೆಗೆ ಮಳೆ ಕಡಿಮೆ. ನೆಲವೂ ತಗ್ಗು.
ಕಾಫಿ ಇಲ್ಲಿಯ ಮುಖ್ಯ ಉತ್ಪನ್ನ. ಇದು ಇಲ್ಲಿ ಬಹುತೇಕ ಕಾಡು ಸಸ್ಯ. ನೈಋತ್ಯ ಪ್ರದೇಶದಲ್ಲಿ ವಿಶೇಷವಾಗಿ ಬೆಳೆಯುತ್ತದೆ. ಕಾಫಿ ಎಂಬ ಹೆಸರು ಬಂದದ್ದೇ ಕಫಾದಿಂದ ಎಂಬುದಾಗಿ ಕೆಲವರು ಭಾವಿಸುತ್ತಾರೆ. ಉಷ್ಣವಲಯದ ಗಟ್ಟಿ ಮತ್ತು ಮೆದುಮರಗಳು ಇತರ ಅರಣ್ಯೋತ್ಪನ್ನಗಳು. ಬತ್ತ, ಬಾರ್ಲಿ, ಎಣ್ಣೆಬೀಜ ಮತ್ತು ಜೋಳ ಮುಖ್ಯ ಬೆಳೆಗಳು. ಪ್ರಸ್ಥಭೂಮಿ ಪ್ರದೇಶದಲ್ಲಿ ಕುದುರೆ ಮತ್ತು ಕುರಿಗಳನ್ನು ಸಾಕುತ್ತಾರೆ. ಚಿನ್ನವೇ ಮುಂತಾದ ಖನಿಜಗಳಿರುವುವಾದರೂ ಅವನ್ನು ಹೆಚ್ಚಾಗಿ ತೆಗೆಯುತ್ತಿಲ್ಲ.

ಜಿಮ್ಮ ಮುಖ್ಯಪಟ್ಟಣ, ವಾಣಿಜ್ಯಕೇಂದ್ರ. ಇಲ್ಲಿಂದ ಆಡಿಸ್ ಅಬಬಕ್ಕೆ ರಸ್ತೆ ಮತ್ತು ವಿಮಾನ ಸಂಪರ್ಕಗಳಿವೆ. ಈ ಪ್ರಾಂತ್ಯದ ಮತ್ತು ನೆರೆಯ ಪ್ರಾಂತ್ಯಗಳ ಪಟ್ಟಣಗಳೊಂದಿಗೂ ವಿಮಾನ ಸಂಪರ್ಕವುಂಟು.

ಈ ಪ್ರಾಂತ್ಯದ ವಿಸ್ತೀರ್ಣ 49210 ಕಿಮೀ. ಇದರ ಈಗಿನ ಹೆಸರು ಥಿಯಾಡೋಸಿಯ.

16ನೆಯ ಶತಮಾನದಲ್ಲಿ ಈ ಪ್ರದೇಶವನ್ನು ಮುಸ್ಲಿಮರು ಆಕ್ರಮಿಸಿಕೊಂಡರು. ಇಲ್ಲಿದ್ದ ಅನೇಕರು ಮುಸ್ಲಿಮರಾದರು. ಕಫಾ ರಾಜ್ಯವನ್ನು ಮೊದಲು ಒಬ್ಬ ನಿರಂಕುಂಶ ದೊರೆ ಆಳುತ್ತಿದ್ದ. ಇದರ ಸುತ್ತಲೂ, ನಿಸರ್ಗ ಸಹಜವಾದ ಪ್ರತಿಬಂಧಕಗಳಿಲ್ಲದಲ್ಲಿ, ಕಂದಕಗಳನ್ನೂ ಕಾಪುಗೋಡೆಗಳನ್ನೂ ನಿರ್ಮಿಸಲಾಗಿತ್ತು. 1897-99ರಲ್ಲಿ ಈ ಪ್ರಾಂತ್ಯವನ್ನು ಎರಡನೆಯ ಮೆನೆಲಿಕ್ ಜಯಿಸಿ ಇಥಿಯೋಪಿಯನ್ ಸಾಮ್ರಾಜ್ಯದಲ್ಲಿ ಸೇರಿಸಿಕೊಂಡ. ಮುಖ್ಯ ಕೇಂದ್ರಗಳ ಜನ ಕ್ರೈಸ್ತಧರ್ಮೀಯರಾದರು. ಆದರೂ ಬಹಳ ಕಾಲ ಇಲ್ಲಿಯ ಜನರನ್ನು ಗುಲಾಮರಂತೆ ಹೊರಕ್ಕೆ ಸಾಗಿಸಿ ಮಾರಾಟ ಮಾಡಲಾಗುತ್ತಿತ್ತು. (ಕೆ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ